ಪುತ್ತೂರು -
ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ಭಾಗವನ್ನೊಳಗೊಂಡ ಐದು ಒಳನಾಡು ತಾಲ್ಲೂಕುಗಳ ಪೈಕಿ ಒಂದು; ಈ ತಾಲ್ಲೂಕಿನ ಆಡಳಿತ ಕೇಂದ್ರ. ಐದು ದಶಕಗಳ ಹಿಂದೆ ಈ ತಾಲ್ಲೂಕಿಗೆ ಉಪ್ಪಿನಂಗಡಿ ತಾಲ್ಲೂಕು ಎಂಬ ಹೆಸರು ಇತ್ತು. ಪುತ್ತೂರು ಪಟ್ಟಣ ಬೆಳೆಯುತ್ತಾ ಬಂದುದರಿಂದ 1927 ರಲ್ಲಿ ಅದನ್ನೇ ತಾಲ್ಲೂಕಿನ ಮುಖ್ಯ ಕೇಂದ್ರವಾಗಿ ಮಾಡಿ ಅದರ ಹೆಸರನ್ನೇ ತಾಲ್ಲೂಕಿಗೂ ಕೊಡಲಾಯಿತು. 1954 ಜುಲೈ 1 ರಂದು ಬೆಳ್ತಂಗಡಿ, 1959 ರ ಅಕ್ಟೋಬರ್ 1 ರಂದು ಬಂಟ್ವಾಳ ಮತ್ತು 1966 ರ ಏಪ್ರಿಲ್ 1 ಸುಳ್ಯ ತಾಲ್ಲೂಕುಗಳು ನಿರ್ಮಾಣವಾದಾಗ ಪುತ್ತೂರು ತಾಲ್ಲೂಕಿನಿಂದ ಕೆಲವು ಭಾಗಗಳನ್ನು ಹೊಸ ತಾಲ್ಲೂಕುಗಳಿಗೆ ವರ್ಗಾಯಿಸಲಾಯಿತು. ಹೀಗಾಗಿ, ಹಿಂದೆ 184 ಗ್ರಾಮಗಳು ಮತ್ತು 3,172 ಚ.ಕಿ.ಮೀ. ವಿಸ್ತೀರ್ಣ ಉಳ್ಳದ್ದಾಗಿದ್ದು ಜಿಲ್ಲೆಯ ಅತ್ಯಂತ ದೊಡ್ಡ ತಾಲ್ಲೂಕಾಗಿದ್ದ ಪುತ್ತೂರು ಈಗ 67 ಗ್ರಾಮಗಳಿಂದ ಕೂಡಿ 1,004 ಚ.ಕಿ.ಮೀ. ವಿಸ್ತೀರ್ಣವುಳ್ಳದ್ದಾಗಿದೆ. ಈ ತಾಲ್ಲೂಕಿನ ಜನಸಂಖ್ಯೆ 2,66,027 (2001). 

ತಾಲ್ಲೂಕಿನ ಹೆಚ್ಚು ಭಾಗ ಬೆಟ್ಟಗುಡ್ಡಗಳಿಂದ ಕೂಡಿದೆ. ಪೂರ್ವದಲ್ಲಿರುವ ಪಶ್ಚಿಮ ಘಟ್ಟಗಳ ಇಳಿಜಾರಿನಲ್ಲಿರುವ ಬೆಟ್ಟಗಳ ಪೈಕಿ ಅಮ್ಮೆಡಿಕಲ್ ಅತ್ಯಂತ ಎತ್ತರವಾದ್ದು. (1,293 ಮೀ.). ಪಶ್ಚಿಮಕ್ಕೆ ಸಾಗಿದಂತೆ ಗುಡ್ಡಗಳು ಕಂಡುಬರುತ್ರವೆ. ನೆಲ ಏರುತಗ್ಗಾಗಿದೆ. ಜಿಲ್ಲೆಯ ಮುಖ್ಯ ನದಿ ನೇತ್ರಾವತಿ. ಕುಮಾರಧಾರಾ ನದಿ ಇದನ್ನು ಉಪ್ಪಿನಂಗಡಿಯಲ್ಲಿ ಕೂಡುತ್ತದೆ. ತಾಲ್ಲೂಕಿನ ಇನ್ನೊಂದು ನದಿ ಗೌರಿ ಹೊಳೆ. ಇದು ಕಡಬಕ್ಕೆ ಪಶ್ಚಿಮದಲ್ಲಿ ಕುಮಾರಧಾರಾ ನದಿಯಲ್ಲಿ ಸಂಗಮಿಸುತ್ತದೆ. ಪುತ್ತೂರು ತಾಲ್ಲೂಕಿನಲ್ಲಿ ಮಳೆ ಹೆಚ್ಚು. ಪುತ್ತೂರು ಪಟ್ಟಣದಲ್ಲಿ ವಾರ್ಷಿಕ ಸರಾಸರಿ ಮಳೆ 4,439 ಮಿ.ಮೀ. 

ತಾಲ್ಲೂಕಿನಲ್ಲಿ ಜಂಬುಮಣ್ಣಿನ ನೆಲವೇ ಹೆಚ್ಚು. ಶಿರಾಡಿ ಘಾಟ್ ಪ್ರದೇಶದಲ್ಲಿ ಹಾರ್ನ್‍ಬ್ಲೆಂಡ್ ಶಿಲೆ ಇದೆ. ತಾಲ್ಲೂಕಿನ ಸುಂಕದಕಟ್ಟೆಯ ಸುತ್ತಣ ಪ್ರದೇಶದಲ್ಲಿ ಅರಬಗುಡ್ಡ, ಬೊರ್ಯಗುಡ್ಡ, ಬೂತಾಲಗುಡ್ಡ, ಒಡತ್ಮುಖಗಳಲ್ಲಿ ಉತ್ತಮ ದರ್ಜೆಯ (54%-57%) ಕಬ್ಬಿಣದ ಅದಿರು ನಿಕ್ಷೇಪಗಳಿವೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯಲ್ಲಿ ಸಂಪ್ಯಾಡಿಯ ಬಳಿ ಕುರಂದ ಕಲ್ಲು ಮತ್ತು ಕ್ಯಾನೈಟ್ ಸಿಗುತ್ತದೆ. ಮೂಡ್ನೂರು ಹೊಳೆ ಹರಿಯುವ ಕಾವು ಎಂಬಲ್ಲಿ ರೇವೆ ಚಿನ್ನದ ರೇಕುಗಳಿವೆ. ನೈಋತ್ಯ ಭಾಗದಲ್ಲಿ ಹರಿಯುವ ಸೀರ್‍ಹೊಳೆಯಲ್ಲಿ ಬೆಟ್ಟಂಪಾಡಿ (ಇದೆ) ಎಂಬಲ್ಲಿರುವ ಬೆಂದ್ರ್ ತೀರ್ಥ ಎಂಬ ಬಿಸಿನೀರಿನ ಕೊಳದಲ್ಲಿ ಗಂಧಕಾಂಶವಿದೆ. ಪುತ್ತೂರಿನಿಂದ 19 ಕಿ.ಮೀ. ದೂರದಲ್ಲಿ (ಉಪ್ಪಿನಂಗಡಿ-ಬಿಸಲೆಘಾಟ್ ರಸ್ತೆಯಲ್ಲಿ) ಹಿರೆಬಂಡಾಡಿ ಗ್ರಾಮದಲ್ಲಿ ಮಲೆನಾಡಿನ ಹಸುರಿನ ನಡುವೆ ಹುದುಗಿರುವ ಕೆಮ್ಮಾರ್ ಸರೋವರ ಸುಂದರವಾಗಿದೆ. ಅದೊಂದು ವಿಶ್ರಾಂತಿಧಾಮ.

ತಾಲ್ಲೂಕಿನ ಮುಖ್ಯ ಉದ್ಯಮ ಬೀಡಿ ಕಟ್ಟುವುದು. ಮೈಸೂರು-ಮಂಗಳೂರು ಹೆದ್ದಾರಿ ಪುತ್ತೂರಿನ ಮೂಲಕ ಹಾದು ಹೋಗುತ್ತದೆ. ಪುತ್ತೂರಿನಿಂದ ಕಾಸರಗೋಡು, ವಿಟ್ಲ, ಸವಣೂರು, ಸುಬ್ರಹ್ಮಣ್ಯ, ಉಪ್ಪಿನಂಗಡಿಗೆ ರಸ್ತೆಗಳಿವೆ. ಹಾಸನ-ಮಂಗಳೂರು ರಸ್ತೆ ಹಾಗೂ ರೈಲು ಮಾರ್ಗಗಳು ಪುತ್ತೂರು ತಾಲ್ಲೂಕಿನ ಶಿರಾಡಿ ಘಾಟಿನ ಮೂಲಕ ಹಾದು ಹೋಗುತ್ತವೆ.

ಪುತ್ತೂರು ತಾಲ್ಲೂಕಿನ ಕಡಬ ಗ್ರಾಮ ವಿಜಯನಗರ ಕಾಲದಲ್ಲಿ ಸುತ್ತಣ ಪ್ರದೇಶದ ಆಡಳಿತ ಕೇಂದ್ರವಾಗಿತ್ತು. ಇಲ್ಲಿ ಗಣೇಶ ಮತ್ತು ನೀಲಕಂಠ ದೇವಾಲಯಗಳಿವೆ. ಸವಣೂರು ಹಿಂದೆ ಜೈನರ ಒಂದು ಕೇಂದ್ರವಾಗಿತ್ತು. ಪುತ್ತೂರಿನ ಈಶಾನ್ಯಕ್ಕೆ 13 ಕಿ.ಮೀ. ದೂರದಲ್ಲಿರುವ ಇಲ್ಲಿ ಹಳೆಯ ಪುಡೊತ್ತು ಚಂದ್ರನಾಥ ಬಸದಿ ಇದೆ. ಉಪ್ಪಿನಂಗಡಿ ಹಿಂದೆ ತಾಲ್ಲೂಕಿನ ಮುಖ್ಯ ಸ್ಥಳವಾಗಿತ್ತು. ಆಗ ಈ ತಾಲ್ಲೂಕಿಗೆ ಈ ಊರಿನ ಹೆಸರೇ ಇತ್ತು. ಇಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಸಂಗಮಿಸುತ್ತಿವೆ. ಉಪ್ಪಿನಂಗಡಿಯಲ್ಲಿರುವ ದೇವಾಲಯಗಳು ಲಕ್ಷ್ಮಿರಮಣ ಮತ್ತು ಸಹಸ್ರ ಲಿಂಗೇಶ್ವರ. ಕೊಯ್ಲ ಒಂದು ಪ್ರಮುಖ ಹೈನು ಕೇಂದ್ರ. ಮಂಗಳೂರಿನಿಂದ ಆಗ್ನೇಯಕ್ಕೆ 52 ಕಿ.ಮೀ. ದೂರದಲ್ಲಿದೆ. ವಿಸ್ತೀರ್ಣ 9.84 ಚ.ಕಿ.ಮೀ. ಜನಸಂಖ್ಯೆ 48,063 (2001). ಸಮುದ್ರ ಮಟ್ಟದಿಂದ ಸು. 111 ಮೀ. ಎತ್ತರದಲ್ಲಿರುವ ಈ ಸ್ಥಳದ ಸುತ್ತಲೂ ಏರುಗುಡ್ಡಗಳಿವೆ. ಇದು ಜಿಲ್ಲೆಯ ಒಳನಾಡಿನ ದೊಡ್ಡ ವ್ಯಾಪಾರ ಮತ್ತು ಶಿಕ್ಷಣ ಕೇಂದ್ರ. ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಪುತ್ತೂರು ಒಂದು ಮುಖ್ಯ ನಿಲ್ದಾಣ. ತಾಲ್ಲೂಕು ಕೇಂದ್ರವಾದ ಪುತ್ತೂರಿಗೆ ಇದರಿಂದ ಮಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳೊಡನೆ ಕ್ರಮಶಃ ರೈಲ್ವೇ ಸಂಪರ್ಕ ದೊರಕಲಿದೆ. ಪುತ್ತೂರಿನ ವಿಚಾರವಾಗಿ ಹಲವು ಐತಿಹ್ಯಗಳೂ ಚಾರಿತ್ರಿಕವಾಗಿ ವಿಜಯನಗರ ಮತ್ತು ಬಂಗರಸರ ಕಾಲದ ಕೆಲವು ಶಾಸನಗಳೂ ಇತರ ದಾಖಲೆಗಳೂ ಇವೆ. ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಾಲಯ ಈ ಪ್ರದೇಶದ ಪುರಾತನ ದೇವಾಲಯಗಳಲ್ಲೊಂದು. ಸುತ್ತಲೂ ದಿಬ್ಬದ ಪ್ರಾಕಾರ ಇರುವ ಈ ದೇವಾಲಯ ಗಜಪೃಷ್ಠಾಕಾರದ್ದಾಗಿ, ಹಿಂದೆ ಪುತ್ತೂರು ಬಲ್ಲಾಳರ ಹೆಗ್ಗಡೆ ಆಡಳಿತದಲ್ಲಿದ್ದ ಏಳ್ನಾಡು ಗುತ್ತಿನ ಸೀಮೆ ದೇವಾಲಯವೆಂದು ಇತಿಹಾಸ ಪ್ರಸಿದ್ಧವಾಗಿದೆ. ಹಿಂದೊಮ್ಮೆ ಕಾಶಿಯಿಂದ ಬರುತ್ತಿದ್ದ ವಿಪ್ರನೊಬ್ಬ ಇಲ್ಲಿ ಭಂಡಾರಿ ಹಿತ್ತಿಲು ಎಂದು ಆಗ ಕರೆಯುತ್ತಿದ್ದ ಸ್ಥಳದಲ್ಲಿ ತಾನು ಹೊತ್ತು ತಂದ ಶಿವಲಿಂಗವನ್ನಿಟ್ಟು ಪೂಜಿಸಿದನೆಂದೂ ಅವನು ಹಾಗೆಯೇ ನಿದ್ದೆ ಹೋಗಿ ಎಚ್ಚೆತ್ತು ಮುಂದಿನ ಪ್ರಯಾಣಕ್ಕೆ ಅಣಿಯಾಗಿ ಆ ಲಿಂಗವನ್ನು ಎತ್ತಲು ಪ್ರಯತ್ನಿಸಿದಾಗ ಕದಲಲಿಲ್ಲವೆಂದೂ ಪ್ರತೀತಿ. ಆಗ ಅವನು ಇಲ್ಲಿಯ ಬಂಗರಾಜನಿಗೆ ತನ್ನ ಕಷ್ಟವನ್ನು ಹೇಳಿಕೊಂಡ ಅವನ ಸೇವಕರಿಂದಾಗಲೀ, ಅವನು ಕಳುಹಿಸಿದ ಪಟ್ಟದ ಆನೆಯಿಂದಾಗಲೀ ಆ ಶಿವಲಿಂಗನ್ನು ಅಲುಗಾಡಿಸಲಾಗಲಿಲ್ಲ. ಆನೆಯೇ ಮೃತ ಹೊಂದಿ ಅದರ ಅಂಗಾಂಗಗಳು ಛಿದ್ರವಾಗಿ ಸೀಮೆಯಲ್ಲೆಲ್ಲ ಚೆಲ್ಲಿ ಬಿದ್ದುವು ಎಂದು ನಂಬಿಕೆ ಇದೆ. ಪುತ್ತೂರು ಪಟ್ಟಣದ ಸುತ್ತುಮುತ್ತಲಿರುವ ಕೊಂಬೆಟ್ಟು, ಕರಿಯಾಲ, ತಾರ್ಜಾಲು, ಕೈಪಳ, ಬೀದಿಮಜಲು, ತಾಳೆಪಾಡಿ, ಕಾರಿಯಲಕಾಡು, ಬೆರಿಪದವು ಮೊದಲಾದ ಸ್ಥಳಗಳ ಹೆಸರುಗಳು ಈ ಕಥೆಯ ಸಾಕ್ಷಿಗಳಂತಿವೆ. ಹೀಗೆ ಶಿವಲಿಂಗ ಹೂತ ಊರೆ ಹೂತೂರು, ಪುತ್ತೂರು ಆಗಿದ್ದಿರಬಹುದೆಂದು ಒಂದು ಊಹೆ. ಮಹಲಿಂಗೇಶ್ವರ ದೇವಾಲಯದ ಪೂರ್ವ ದಿಕ್ಕಿಗೆ ವಿಶಾಲವಾದ ತೇರುಗದ್ದೆ, ಪಶ್ಚಿಮಕ್ಕೆ ದೊಡ್ಡ ಕೆರೆ. ದೇವಾಲಯದ ಪ್ರದಕ್ಷಿಣ ಪಥದಲ್ಲಿ ಪರಿವಾರ ದೇವತೆಗಳ ಗುಡಿಗಳೂ ಕಾರ್ಯನಿರ್ವಾಹಕ ದೈವಗಳ ಗುಡಿಗಳೂ ಇವೆ. ಕೆರೆಯಲ್ಲಿ ಮುತ್ತು ಬೆಳೆಯುವುದೆಂದು ನಂಬಿಕೆ ಇದೆ. ಮೊದಲಲ್ಲಿ ಈ ಊರಿಗೆ ಮುತ್ತೂರು ಹೆಸರಿತ್ತೆಂದೂ ಅದೇ ಮಾರ್ಪಟ್ಟು ಪುತ್ತೂರು ಎಂದಾಯಿತೆಂದೂ ಹೇಳುವುದುಂಟು. ದೇವಾಲಯದ ಬಸವ ಕೆರೆಕಟ್ಟೆಯ ಅಶ್ವತ್ಥ ವೃಕ್ಷದಲ್ಲಿ ಗರುಡ-ಸರ್ಪಗಳ ವೈರವರ್ಜಿತವಾಸ, ಚಿನ್ನದ ತೆನೆ, ಪಚ್ಚೆ ಕಡಗ, ಮೊದಲಾದುವು ದೊರೆತ ಬಗೆ ಅಂಕದಗದ್ದೆಯ ಬಂಗಾರತಾಯ ಸ್ಥಳದ ವೈಶಿಷ್ಟ್ಯ. ಶ್ರೀದಂಡನಾಯಕ ಮತ್ತು ಉಳ್ಳಿ ಎಂಬ ದೈವಗಳು ನಿತ್ಯಾರ್ಚನೆ ಮತ್ತು ಉತ್ಸವ ಕಾಲದ ವಿಧಿವಿಧಾನಗಳು ಮುಂತಾದುವನ್ನು ಕುರಿತ ಅನೇಕ ಐತಿಹ್ಯಗಳಿವೆ. ಪ್ರತಿ ವರ್ಷ ಮೀನ ಮಾಸ 18 ರಂದು ಗೊನೆ ಕಡಿಯುವುದು, 27 ರಂದು ಧ್ವಜಾರೋಹಣ ಆಗಿ ಒಂಬತ್ತು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ದೇವಾಲಯದಲ್ಲಿ ಮೂರು ಶಿಲಾಶಾಸನಗಳಿವೆ. 13 ನೆಯ ಶತಮಾನದ್ದೆನ್ನಲಾದ ಒಂದು ಶಾಸನದಲ್ಲಿ ಮುತ್ತು ಬೆಳೆಯುವ ಕೆರೆಯಲ್ಲಿ ಮೀನು ಹಿಡಿಯುವುದು ನಿಷಿದ್ಧವೆನ್ನಲಾಗಿದೆ. ಹಿಂದೊಮ್ಮೆ ಕೊಡಗಿನ ಅರಸರ ಆಡಳಿತಕ್ಕೊಳಪಟ್ಟಿದ್ದ ಈ ಪ್ರದೇಶವನ್ನು ತಮಗೆ ಬಿಟ್ಟುಕೊಡುವುದಾದರೆ ಅದರ ಬದಲಿಗೆ ನಾಲ್ಕು ಪಾಲಿನಷ್ಟು ಪ್ರದೇಶವನ್ನು ಕೊಡುತ್ತೇವೆಂದು ಬ್ರಿಟಿಷರು ಹೇಳಿದರೆಂದೂ ಅರಸು ಹತ್ತೂರು ಕೊಟ್ಟರೂ ಪುತ್ತೂರನ್ನು ಕೊಡೆ ಎಂದು ನಿರಾಕರಿಸಿದನೆಂದೂ ಪ್ರತೀತಿ ಇದೆ. ಆದರೆ ಮುಂದೆ ಕೊಡಗು ಬ್ರಿಟಿಷರ ಅಧೀನವಾದಾಗ ಅವರು ಪುತ್ತೂರನ್ನು ಸರ್ಕಾರದ ನೆಲೆಯಾಗಿ ಮಾಡಿಕೊಂಡರು. ತರುವಾಯ ಕೋರ್ಟ್, ಕಚೇರಿ, ಪೇಟೆ, ಜನಸಮೂಹ ಮೊದಲಾದುವು ಹೆಚ್ಚಿ ಪುತ್ತೂರು ಮುನ್ನಡೆಯಿತು. ಪುರಸಭಾ ಆಡಳಿತವನ್ನು ಪಡೆದಿರುವ ಪುತ್ತೂರಿನಲ್ಲಿ ಈಗ ತಾಲ್ಲೂಕು ಮಟ್ಟದ ಎಲ್ಲ ಸರ್ಕಾರಿ ಕಚೇರಿಗಳು ಇರುವವಲ್ಲದೆ, ವಿವೇಕಾನಂದ ಮತ್ತು ಸೇಂಟ್ ಫಿಲೊಮಿನ ಕಾಲೇಜುಗಳಿವೆ. ಅಲ್ಲದೆ, ಒಂದು ಸಂಮ್ಮಿಶ್ರ ಕಿರಿಯ ಕಾಲೇಜ್ ಎರಡು ಪ್ರೌಢಶಾಲೆಗಳು ಮತ್ತು ಹಲವು ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಇಡೀ ಜಿಲ್ಲೆಯಲ್ಲೇ ಮೊದಲನೆಯದಾಗಿ ಸಹಕಾರ ಸಂಘ 1909 ರಲ್ಲಿ ಸ್ಥಾಪನೆಯಾದ್ದು ಪುತ್ತೂರಿನಲ್ಲಿ. ಸಹಕಾರ ರಂಗದಲ್ಲೂ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ ಶಾಲೆಗಳ ಏಳಿಗೆಯಲ್ಲೂ ಸುದೀರ್ಘ ಕಾಲ ಪ್ರಶಂಸನೀಯ ಸೇವೆ ಸಲ್ಲಿಸಿದ ಮೊಳಹಳ್ಳಿ ಶಿವರಾಯರು ಪುತ್ತೂರಿನವರು. ಮೂರು-ನಾಲ್ಕು ದಶಕಗಳ ಹಿಂದೆ ವಿಶಿಷ್ಟ ವೈಭವದ ದಸರ ಉತ್ಸವ (ನಾಡಹಬ್ಬ) ಮತ್ತು ಬಾಲವನಗಳಿಂದ ಪುತ್ತೂರನ್ನು ಬೆಳಗಿಸಿದವರು ಖ್ಯಾತ ಕನ್ನಡ ಸಾಹಿತಿಗಳಾದ ಕೋಟಿ ಶಿವರಾಮ ಕಾರಂತರು. ಇನ್ನೂ ಹಲವಾರು ಗಣ್ಯ ಮಹನೀಯರ ಶ್ಲಾಘನೀಯ ಸೇವಾ ಕಾರ್ಯಗಳಿಂದ ಪುತ್ತೂರು ವರ್ಧಮಾನವಾಗಿದೆ. ಎಲ್ಲ ಜಾತಿ ಮತಗಳವರ ಪೂಜಾ ಮಂದಿರಗಳೂ ಮೂರು ಅಂತರ ರಾಷ್ಟ್ರೀಯ ನೆಲೆಯ ಸೇವಾ ಸಂಸ್ಥೆಗಳೂ ಪುತ್ತೂರಿನಲ್ಲಿವೆ. ತಾಮ್ರದ ಪಾತ್ರೆ ತಯಾರಿಕೆ, ಜೇನು ವ್ಯವಸಾಯ, ಮರ ಕೊಯ್ಯುವ ಕೈಗಾರಿಕೆ, ಗೇರು ಬೀಜದ ವ್ಯವಸಾಯ ಮತ್ತು ಕೆಲವು ಗುಡಿಗಾರಿಕೆಗಳಿಗೆ ಪುತ್ತೂರು ಹೆಸರಾಗಿದೆ. 					(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ